ಕಾರ್ಗಿಲ್ ವಿಜಯೋತ್ಸವವು ಈ ವರ್ಷ 25ನೇ ವರ್ಷದ ಸಂಭ್ರಮಾಚರಣೆಯೊಂದಿಗೆ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಕಾರ್ಗಿಲ್ ಯುದ್ದಕ್ಕಾಗಿ ರೂಪುಗೊಂಡ ಆಪರೇಷನ್ ವಿಜಯ್ ದಲ್ಲಿ ಮಡಿದ ಭಾರತೀಯ ಸೈನಿಕರನ್ನು ಸ್ಮರಿಸುತ್ತಾ , ಅದರ ಇತಿಹಾಸವನ್ನು ಒಂದಷ್ಟು ಮೆಲುಕು ಹಾಕೋಣ…
ಬ್ರಿಟಿಷರ ಆಳ್ವಿಕೆಯ ನಂತರ ಭಾರತದಲ್ಲಿದ್ದ ದೇಶೀಯ ಸಂಸ್ಥಾನಗಳು ಒಟ್ಟುಗೂಡಿ 2 ರಾಷ್ಟ್ರಗಳಾಗಿ ವಿಭಜನೆ ಹೊಂದಿದವು. 1947 ರಲ್ಲಿ ಸ್ವತಂತ್ರವಾಗಿ ಹೊರಹೊಮ್ಮಿದ ಒಂದೇ ತಾಯಿಯ ಮಕ್ಕಳಾದ ಈ ರಾಷ್ಟ್ರಗಳು, ಅವಳಿ ಜವಳಿಯಂತೆ ಸಹೋದರತ್ವದಿಂದ ವಿಶ್ವದ ಪ್ರಗತಿಯತ್ತ ಸಾಗಲೆಂದು ಅಂದಿನ ರಾಷ್ಟ್ರ ದಿಗ್ಗಜ್ಜರು ಕನಸನ್ನು ಹೊತ್ತಿದ್ದರು. ಇದಕ್ಕೆ ಸರ್.ರಾಡ್ ಕ್ಲಿಫ್ ನೇತೃತ್ವದ ತಂಡವು ಎರಡು ದೇಶಗಳ ಮಧ್ಯೆ ಗಡಿರೇಖೆ ಗುರುತಿಸಿ ಬೇರ್ಪಟ್ಟಿಸಿತು. ಪ್ರಸ್ತುತ ಸಿಂಗಾಪುರ್, ಜಪಾನ್ ನಂತಹ ರಾಷ್ಟ್ರಗಳು ಪುಟ್ಟದಾಗಿದ್ದರೂ ಇಂದು ವಿಶ್ವಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆ ರಾಷ್ಟ್ರಗಳಿಗಿಂತ ಹಲವಾರು ಪಟ್ಟು ದೊಡ್ಡದಾದ ಪಾಕಿಸ್ತಾನವು 1947ರಿಂದಲೂ ಶಾಂತಿ – ಸಾಧನೆಗಳ ಕಡೆ ನೀಡಬೇಕಾದ ಲಕ್ಷ್ಯವನ್ನು, ತನ್ನ ರಾಷ್ಟ್ರದ ವ್ಯಾಪ್ತಿಯನ್ನು ಒಂದಿಷ್ಟು ಕಿಲೋ ಮೀಟರ್ ಗಡಿಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಭಾರತದ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಯುದ್ಧ ತಂತ್ರಗಳನ್ನು ಎಸೆಯುತ್ತಾ, ಎರಡು ರಾಷ್ಟ್ರಗಳು ರಕ್ಷಣೆಗಾಗಿಯೇ ಹೆಚ್ಚಿನ ಸಮಯ,ಹಣ ಮತ್ತು ತಂತ್ರಜ್ಞಾನಗಳನ್ನು ಬಳಸುವಂತೆ ಮಾಡಿಬಿಟ್ಟಿದೆ.
1971 ರಿಂದಲೂ ಪಾಕಿಸ್ತಾನವು ಭಾರತದ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಸಂಚಿನ ಯುದ್ಧದೊಂದಿಗೆ ನಿರಂತರ ಪ್ರಯತ್ನ ನಡೆಸುತ್ತಿತ್ತು. ಇಲ್ಲಿಯವರೆಗೂ ಪಾಕಿಸ್ತಾನವು ಭಾರತದ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದೆ. ಅವುಗಳಲ್ಲಿ ಭಾರತೀಯ ಸೇನೆಯು ಯಾವಾಗಲೂ ತನ್ನ ಶೌರ್ಯ ಮೆರೆದು ಪಾಕಿಸ್ತಾನವನ್ನು ವಿಫಲವಾಗಿಸಿದೆ. ಈ ಯುದ್ಧಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕೊನೆಯ ಯುದ್ಧವೇ ಕಾರ್ಗಿಲ್.
ಫೆಬ್ರವರಿ 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಒಪ್ಪಂದವು ಏರ್ಪಟ್ಟಿತು, ಆದರೂ ಭಾರತದ ಕಾಶ್ಮೀರದ ಕಾರ್ಗಿಲ್ ನ ದ್ರಾಸ್ ಎತ್ತರದ ಪ್ರದೇಶವನ್ನು ಮೇ 6, 1999 ರಂದು ಪಾಕಿಸ್ತಾನ ಸೇನೆಯು 5000 ಸೈನಿಕರೊಂದಿಗೆ ನುಸುಳಿತು. ಆಗ ಕಾರ್ಗಿಲ್ ಶ್ರೇಣಿಗಳ ಮೇಲೆ ಗಸ್ತು ತಿರುಗುತ್ತಿದ್ದ ಭಾರತೀಯ ಸೇನೆಯು ನುಸುಳುಕೋರರ ಬಗ್ಗೆ ಮಾಹಿತಿ ಪಡೆದು, ಪ್ರತಿತಂತ್ರವಾಗಿ ಮೇ 8 ರಿಂದ 15 ರವರೆಗೆ ಆಪರೇಷನ್ ವಿಜಯ್ ಕಾರ್ಯಪಡೆಯ ಮೂಲಕ ಪಾಕಿಸ್ತಾನಿ ಸೈನ್ಯಕ್ಕೆ
” ಕಾಶ್ಮೀರದ ಕಣಿವೆಯಲ್ಲಿ ಹಗೆಯ ಕೆಂಗಿಡಿ
ಸಿಡಿದರೆ ಮಗೆ ಭಯವೆ ? ನಮ್ಮ ಬಲವು ನೂರ್ಮಡಿ.”
ಎಂಬ ಬಿ.ಎ.ಸನದಿ ರವರ ಸಾಲುಗಳಂತೆ ಪ್ರತ್ಯುತ್ತರ ನೀಡಿತು. ಸು.18000 ಅಡಿ ಎತ್ತರದಲ್ಲಿ ನಡೆದ ಈ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾ. ಸೌರವ್ ಕಾಲಿಯಾ, ವಿನೋದ್ ಕುಮಾರ್, ವೇದಪ್ರಕಾಶ್ ಹಾಗೂ ಬಾಗಲಕೋಟೆಯ ಶಿವಬಸಯ್ಯ ಕುಲಕರ್ಣಿ ಯವರನ್ನು ಒಳಗೊಂಡಂತೆ 527 ಭಾರತೀಯ ಸೈನಿಕರು ಮತ್ತು 1300 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡರು. ಹೀಗೆ ಕಾರ್ಗಿಲ್ ಯುದ್ಧವು ಭಾರತದ ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯಿತು. ಆಪರೇಷನ್ ವಿಜಯ್ ಕಾರ್ಯತಂತ್ರವು ಆಕ್ರಮಿತ ಪ್ರದೇಶಗಳ ನಿಯಂತ್ರಣವನ್ನು ಪಾಕಿಸ್ತಾನಿ ಸೈನ್ಯದಿಂದ ಮರಳಿ ಪಡೆದು ಆ ಪ್ರದೇಶಗಳನ್ನು ವಿಮೋಚಿಸಿತು.
ಕಾರ್ಗಿಲ್ ವಿಜಯೋತ್ಸವವು ನಮ್ಮ ಭಾರತೀಯ ಸೇನೆಯು ”ಆಪರೇಷನ್ ವಿಜಯ್”ನಲ್ಲಿ ಭಾಗವಹಿಸಿದ ಎಲ್ಲ ವೀರರನ್ನು ಗೌರವಿಸುವ ಮಹತ್ವದ ಆಚರಣೆಯ ಹಬ್ಬವಾಗಿದೆ. ರಾಷ್ಟ್ರವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆ ಮಾಡಿದ ಶೌರ್ಯ ಸಮರ್ಪಣೆಯನ್ನು ನೆನೆಯುತ್ತಾ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರದ ಪ್ರಮುಖರೊಂದಿಗೆ ಭಾರತೀಯ ಸೈನ್ಯದ ಎಲ್ಲಾ ಪಡೆಗಳ ಮುಖ್ಯಸ್ಥರು ಮತ್ತು ಸೈನಿಕರೊಟ್ಟಿಗೆ ಲಡಾಖ್ ನ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಎಂದಿನಂತೆ ಪ್ರತಿವರ್ಷ ಜುಲೈ 26 ರಂದು ಆಚರಿಸುತ್ತಾ ಬಂದಿದ್ದು, ಹಾಗೆಯೇ ಈ ವರ್ಷ 25 ವರುಷಗಳ ರಜತ ಸಂಭ್ರಮದಲ್ಲಿ ಯುದ್ಧದ ವಿಜಯವನ್ನು ಆಚರಿಸುತ್ತಿದೆ.